ಮಾರಣಹೋಮಕ್ಕೆ ಸಾಕ್ಷಿಯಾದ ಕೊಂಡಾಣ --ರೇಟಿಂಗ್ : 3.5/5 ****
Posted date: 27 Sat, Jan 2024 09:13:33 AM
ಈವಾರ ತೆರೆಕಂಡಿರುವ ಕೇಸ್ ಆಫ್ ಕೊಂಡಾಣ ಒಂದು ಹೈಪರ್‌ ಲಿಂಕ್ ಕ್ರೈಂ, ಥ್ರಿಲ್ಲರ್  ಹಿನ್ನೆಲೆಯ ಚಿತ್ರ.ಇದು ಪಕ್ಕಾ ಪೊಲೀಸ್ ಸ್ಟೋರಿ. ಇಡೀ ಚಿತ್ರದಲ್ಲಿ ಪಾನಿಪುರಿ ಮಾರುವ ವ್ಯಕ್ತಿ, ಕುಟುಂಬ, ನಾಯಕನ ತಂದೆ, ನಾಯಕಿ, ಆಕೆಯ ತಂದೆ ಹೀಗೆ ಒಂದೆರಡು ಪಾತ್ರಗಳನ್ನು ಬಿಟ್ಟರೆ, ಉಳಿದೆಲ್ಲವೂ   ಪೊಲೀಸ್ ಪಾತ್ರಗಳೇ ಆಗಿರುವುದು  ಚಿತ್ರದ ವಿಶೇಷ,   ಸೀತಾರಾಮ್ ಬಿನೋಯ್ ಚಿತ್ರದ  ನಾಯಕ ವಿಜಯ ರಾಘವೇಂದ್ರ ಹಾಗೂ  ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ  ಇಲ್ಲಿ ಮತ್ತೊಮ್ಮೆ ಜೊತೆಯಾಗಿದ್ದಾರೆ. 
 
ಬಹುತೇಕ ಕ್ರೈಮ್ ಪ್ರಕರಣಗಳು ನಡೆಯುವುದೇ ಆಕಸ್ಮಿಕವಾಗಿ. ಉದ್ದೇಶಪೂರ್ವಕವಾಗಿ  ಕ್ರೈಮ್ ಮಾಡುವುದು ವಿರಳ.  ಸಮಯ, ಸಂದರ್ಭಗಳೇ ಕ್ರೈಮ್ ನಡೆಯಲು ಕಾರಣವಾಗುತ್ತವೆ, ಅಂಥದೇ  ಸಂದರ್ಭದ ಸುಳಿಯಲ್ಲಿ  ಸಿಕ್ಕ ಯುವ ಪೊಲೀಸ್ ಒಬ್ಬನ ಕಥೆಯೇ ಕೇಸ್ ಆಫ್ ಕೊಂಡಾಣ.   ಬೆಂಗಳೂರಿನ ಹೊರವಲಯದ ಕಾಲ್ಪನಿಕ ಸ್ಥಳವನ್ನು ಕೊಂಡಾಣ ಎಂದು ನಿರ್ದೇಶಕರು ಚಿತ್ರದಲ್ಲಿ ಬಿಂಬಿಸಿದ್ದಾರೆ, ಆ ಜಾಗದಲ್ಲಿ  ಆಕಸ್ಮಿಕವಾಗಿ ಮೂವರು ಪೊಲೀಸ್ ಅಧಿಕಾರಿಗಳು  ಸಜೀವ ದಹನವಾಗುತ್ತಾರೆ. ಆ ಘಟನೆಗೆ ಆಗತಾನೆ  ಎಎಸ್‌ಐ ಆಗಿ ಪೊಲೀಸ್ ಇಲಾಖೆಗೆ ಸೇರಿದ್ದ ವಿಲ್ಸನ್(ವಿಜಯ್ ರಾಘವೇಂದ್ರ) ಪರೋಕ್ಷವಾಗಿ ಕಾರಣನಾಗುತ್ತಾನೆ. ಅದಕ್ಕೂ ಮುನ್ನ  ಆಕಸ್ಮಿಕವಾಗಿ ಆತನಿಂದ ಅಮಾಯಕ ವ್ಯಕ್ತಿಯೊಬ್ಬ ಸತ್ತೇ ಹೋಗಿರುತ್ತಾನೆ. ಮುಂದೆ ನಾಯಕ ವಿಲ್ಸನ್ ಆ ಎಲ್ಲ  ಆಪಾದನೆಗಳಿಂದ  ಹೊರಬರಬೇಕೆಂಬ ಭರದಲ್ಲಿ  ಮತ್ತಷ್ಟು  ಅಪರಾಧಗಳನ್ನು ಮಾಡಬೇಕಾಗುತ್ತದೆ, ಕೊನೆಗೆ ಆತನಿಗೆ ತಾನು ಎಸಗಿದ ಅಪರಾಧಗಳ ಬಗ್ಗೆ ಪಶ್ಚಾತ್ತಾಪವಾಯಿತೇ, ಅಲ್ಲಿ ಮರಣಿಸಿದ ಪೊಲೀಸರಿಗೂ ವಿಲ್ಸನ್ ಗೂ ಏನು ಸಂಬಂಧ ಇದಕ್ಕೆಲ್ಲ ಉತ್ತರವನ್ನು ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ  ತುಂಬಾ ರೋಚಕವಾಗಿ ನಿರ್ದೇಶಕ ದೇವಿ ಪ್ರಸಾದ್ ಅವರು ತೆರೆಮೇಲೆ ತೆರೆದಿಟ್ಟಿದ್ದಾರೆ. ಪಾನಿಪುರಿ ಮಾರುವ ಅಮಾಯಕ ಯುವಕನ  ಆಕಸ್ಮಿಕ ಮರಣದ  ನಂತರ ಕೇಸ್ ಆಫ್ ಕೊಂಡಾಣ ಚಿತ್ರಕಥೆ ರೋಚಕ ಹಾದಿಗೆ ತಿರುಗುತ್ತದೆ, ಅದು ಮುಂದೆ ಎತ್ತೆತ್ತಲೋ ಸಾಗಿ ಮತ್ತಿನ್ನೆಲ್ಲಿಗೂ ಬಂದು ಸೇರುತ್ತದೆ.    
 
ಇಲ್ಲಿ ಮೂರು ಪ್ರತ್ಯೇಕ ಕಥೆಗಳು ಬೇರೆ ಬೇರೆ ದಿಕ್ಕಿನಲ್ಲಿ ಸಾಗುತ್ತಿರುತ್ತವೆ. ಕೊನೆಗೆ ಒಂದು ಪಾಯಿಂಟ್‌ನಲ್ಲಿ ಅವೆಲ್ಲವೂ ಬಂದು ಸೇರಿಕೊಳ್ಳುತ್ತವೆ. ಆ ಜಾಗವೇ ಕೊಂಡಾಣ. ಇಡೀ ಕಥೆಯ ಕೇಂದ್ರಬಿಂದು ವಿಲ್ಸನ್ ಎಂಬ ಯುವಪೊಲೀಸ್ ಪಾತ್ರ. ಈ ಕಥೆಯಲ್ಲಿ ಪರಿಸ್ಥಿತಿಯೇ ವಿಲನ್ ಅನ್ನಬಹುದು. ಅಚಾನಕ್ ಆಗಿ ಜರುಗುವ ಮಿಸ್ಟೇಕ್‌ಗಳು ನಮ್ಮನ್ನು ಎಲ್ಲಿವರೆಗೂ ಬೇಕಾದರೂ ಕರೆದುಕೊಂಡು ಹೋಗಬಹುದು ಎಂಬುದನ್ನು ಬಹಳ ಪರಿಣಾಮಕಾರಿಯಾಗಿ ಚಿತ್ರದಲ್ಲಿ  ತೋರಿಸಲಾಗಿದೆ.
 
ಈ ಚಿತ್ರದ ಹೈಲೈಟ್ ಎಂದರೆ, ಚಿತ್ರಕಥೆ. ನಡೆಯೋ ಘಟನೆಗಳನ್ನು ಒಂದಕ್ಕೊಂದು ಲಿಂಕ್ ಮಾಡುತ್ತಾ, ಚಿತ್ರಕಥೆಯನ್ನು ತೆಗೆದುಕೊಂಡು ಹೋಗಿರುವ  ನಿರ್ದೇಶಕರ  ಶೈಲಿ ಸೊಗಸಾಗಿದೆ. ಗಗನ್ ಬಡೇರಿಯಾ ಅವರ ಹಿನ್ನೆಲೆ ಸಂಗೀತ  ಸಿನಿಮಾದ ರೋಚಕತೆಯನ್ನು ಹೆಚ್ಚಿಸುತ್ತದೆ.  ಬಹುತೇಕ ಚಿತ್ರಕಥೆ ರಾತ್ರಿಯಲ್ಲೇ ನಡೆಯುತ್ತದೆ,  ಅನುಭವಿ ಕಲಾವಿದರ ನಟನೆ ಈ ಸಿನಿಮಾದ ಪ್ಲಸ್ ಪಾಯಿಂಟ್ ಎನ್ನಬಹುದು.
 
ಚಿತ್ರದಲ್ಲಿ  ನಟ ವಿಜಯ್ ರಾಘವೇಂದ್ರ ಅವರಿಗೆ  ಬಹಳ ಸವಾಲಿನ ಮತ್ತು ಬೇರೆ ರೀತಿಯ ಶೇಡ್ ಇರುವಂತಹ ಪಾತ್ರ ಸಿಕ್ಕಿದೆ. ಪರಿಸ್ಥಿತಿಯ ಕೈಗೊಂಬೆಯಾಗಿ ಒದ್ದಾಡುವ ಪೊಲೀಸ್ ಆಗಿ ವಿಜಯ್ ರಾಘವೇಂದ್ರ ಅವರದ್ದು ಪ್ರಬುದ್ದ ಅಭಿನಯ, ಉಳಿದಂತೆ, ಎಸಿಪಿ ಲಕ್ಷ್ಮಿಯಾಗಿ ಭಾವನಾ ಮೆನನ್, ಡಾಕ್ಟರ್ ಆಗಿ ಖುಷಿರವಿ,  ರಂಗಾಯಣ ರಘು, ಅಶ್ವಿನ್ ಹಾಸನ್, ಬಲ ರಾಜವಾಡಿ ಎಲ್ಲರೂ  ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed